ಶುಕ್ರವಾರ, ಮೇ 9, 2014

ಹಲೋ ಸಿನಿಮಾದವ್ರೆ, ಏನ್ ಸ್ವಾಮಿ ಮಲಗಿದ್ದೀರಾ?

ಡಬ್ಬಿಂಗ್ ವಿಷಯದಲ್ಲಿ ಮೂರನೆ ಕಣ್ಣು, ನಾಲ್ಕನೇ ಕಣ್ಣು ಅಂತ ಏನೇನೋ ಬಡಬಡಾಯಿಸ್ತಿದ್ದ ಸಿನಿಮಾ ಮಂದಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಅನ್ನುವ ಸುಪ್ರಿಂಕೊರ್ಟ್ ತೀರ್ಪಿನ ಬಗ್ಗೆ ಚಕಾರ ವೆತ್ತದೆ ಸುಮ್ಮನೆ ಇರೋದು ನೋಡಿದರೆ ಇವರ ನಿಜವಾದ ಕನ್ನಡ ಪ್ರೇಮ ಇಂದು ಬಯಲಾಗುತ್ತಿದೆ.

ಅಪ್ಪಾಜಿ ಡಬ್ಬಿಂಗ್ ಬೇಡ ಅಂದ್ರು ಅದಕ್ಕೆ ನಾನು ಬೇಡ ಅಂತೀನಿ ಅಂತ ಹೇಳಿದ್ರಿ, ಅಲ್ಲ ಸ್ವಾಮಿ, ಅಪ್ಪ ರಾಜಕೀಯ  ಬೇಡ ಅಂದಿದ್ರು ಆದ್ರೆ ಹೆಂಡತಿ ರಾಜಕೀಯಕ್ಕೆ ಬಂದ್ರೆ ಆಕ್ಷೇಪವಿಲ್ಲ ಅಲ್ವೇ, ಎಂಥ ದ್ವಂದ್ವ ನಿಲುಗಳು ನಿಮ್ಮದು. ಹೀಗೆ ದ್ವಂದ್ವ ತತ್ವಗಳಲ್ಲಿ ಮುಳುಗಿರುವವರಿಗೆ ಕನ್ನಡದ ಕಾಳಜಿ ಯಾವ ಮುಖ್ಯ ಅಲ್ವಾ? ಅವಾಗವಾಗ ಒಂದು ಮಾತು ಹೇಳ್ತಾ ಇರ್ತೀರಾ? ನಾನು ಹುಟ್ಟಿದ್ದು ಓದಿದ್ದು ಮದ್ರಾಸ್ ನಲ್ಲಿ, ನನ್ನ ಹೆಚ್ಚಿನ ಸ್ನೇಹಿತರು ಇದ್ದಿದ್ದು ಮದ್ರಾಸ್ ನಲ್ಲಿ. ಹಾಗಾಗಿ ಕನ್ನಡ ನನಗೆ ಅಷ್ಟೊಂದು ಚೆನ್ನಾಗಿ ಬರಲ್ಲ. ಆದರೆ ೩೦ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದೀರ, ಈ ಮೂವತ್ತು ವರ್ಷದಲ್ಲಿ ಸ್ಪಷ್ಟವಾಗಿ ಸುಲಲಿತವಾಗಿ ಮಾತಾನಾಡೋದು ಕಲೀಲಿಲ್ವ ನೀವು?

ಹಾಸ್ಯನಟ ಜಗ್ಗೇಶ್ ಡಬಾಲ್ ಡುಬಾಲ್ ಅಂತ ಅಂದು ಡಬ್ಬಿಂಗ್ ಹೋರಾಟದಲ್ಲಿ ಕಾಮಿಡಿ ಮಾಡಿದ್ದ, ಮೀಟರ್ ಇದ್ದರೆ ಜನರ ಮಧ್ಯೆ ಬಂದು ಡಬ್ಬಿಂಗ್ ಬೇಕು ಅಂದು ಗುಡುಗಿದ್ದ. ಜಗ್ಗೇಶ್ ಸಿನಿಮಾ ಜೀವನದಲ್ಲಿ ನೆನಪಿನಲ್ಲಿ ಉಳಿದುಕೊಳ್ಳುವಂತೆ ಮಠ ಮತ್ತು ಎದ್ದೇಳು ಮಂಜುನಾಥ ಕೊಟ್ಟ ನಿರ್ದೇಶಕ ಗುರುಪ್ರಸಾದ್ ಹೆಸರು ಪ್ರಸ್ತಾಪಿಸದೆ ''ಎರಡು ಚಿತ್ರ ಮಾಡಿ ಏಳು ವರ್ಷ ಪ್ರಚಾರ ಪಡೆದ ಸಣ್ಣ ಹುಡುಗ ತಾನು 28 ವರ್ಷಗಳಿಂದ ಸಿನಿಮಾ ಸರ್ವೆ ಮಾಡಿದ್ದೀನಿ ಎಂದು ಹೇಳಿದ್ದಾನೆ. ಆತನಿಗೀಗ 38 ವರ್ಷ. ಚಿಕ್ಕ ವಯಸ್ಸಿನಲ್ಲಿ ತಲೆಗೆ ಏಟು ಬಿದ್ದು, ಗಾಯವಾಗಿದೆ ಅನಿಸುತ್ತದೆ. ಹಾಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾನೆ,'' ಎಂದಿದ್ದ. ಕನ್ನಡವನ್ನು ಗುತ್ತಿಗೆ ಪಡೆದುಕೊಂಡವನಂತೆ ಅಂದು ಬಡಬಡಾಯಿಸಿದ್ದ. 

ಆದರೆ ಇತ್ತೀಚಿಗೆ ತನ್ನ ಮಗನಿಗೆ ಪರಂಗಿ ಹೆಣ್ಣು ತಂದುಕೊಂಡು ತನ್ನ ಅತೀವ ಕನ್ನಡ ಪ್ರೇಮ ಮೆರೆದಿದ್ದಾನೆ. ಇಂದು ಸುಪ್ರಿಂ ಕೋರ್ಟ್ ತೀರ್ಪಿನ ಬಗ್ಗೆ ಏನೂ ಮಾತಾಡದೆ ಸುಮ್ಮನೆ ಇದ್ದಾನೆ. ಇದೇ ನೋಡಿ ಇವನ ಕನ್ನಡ ಪ್ರೇಮ. ಇವನ ಸಿನಿಮಾಗಳಲ್ಲಿ ಎಂತೆಂಥಾ ಕನ್ನಡ ಶಬ್ದಗಳು ...... ಡಗಾರ್, ಅಯ್ಯನ್, ಅಕ್ಕನ್, ಆಂವ್,  ಮ್ಯಾಂವ್, ...!!! ಅಂದು ಹೋರಾಟದಲ್ಲಿ, ,  ‘ಗಾಸಿಪ್ ಮಾಂಗಿಂಗ್’,‘ಮೀಟರ್’, ‘ಆಯಮ್ಮನ ಜೊತೆ ಅಫೇರ್’ ಮುಂತಾದ ಕನ್ನಡ ಶಬ್ಧಗಳು ಯಥೇಚ್ಛವಾಗಿ ಉಪಯೋಗಿಸಿದ್ದ.

ಈ ಸಿನಿಮಾ ಮಂದಿಗೆ ಸರಿಯಾಗಿ ಸ್ಪಷ್ಟ ಕನ್ನಡ ಮಾತನಾಡೋದು ಬರಲ್ಲ, ಇವರ ಮನೆ ಮಂದಿಯೆಲ್ಲ ಕಲಿಯೋದು ಪ್ರತಿಷ್ಟಿತ ಆಂಗ್ಲ ಮಾದ್ಯಮ ಶಾಲೆಗಳಲ್ಲಿ, ಮಾತನಾಡೋದು ಒಂದು, ನಡೆದು ಕೊಳ್ಳೋದು ಇನ್ನೊಂದು, ವಿಷಯ ಹೀಗಿರುವಾಗ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ?

ಇವರಿಗೆ ಅವರ ಮಾರ್ಕೆಟ್ ಹಾಗು ಅವರ ಸಿನಿಮಾ ಬಗ್ಗೆ ಇರೋ ಕಾಳಜಿ ಬಿಟ್ರೆ, ರಾಜ್ಯದ ಬೇರೆ ಯಾವ ವಿಷಯದಲ್ಲಿ ಇವರು ಮೂಗು ತೂರಿಸುತ್ತಾರೆ? ರೈತರ ಆತ್ಮಹತ್ಯೆ ವಿಷಯದಲ್ಲಿ ಕನಿಷ್ಟ ಪಕ್ಷ ಒಂದು ಕುಟುಂಬಕ್ಕಾದಾರು ಸಾಂತ್ವನ ಹೇಳಿದ್ದಾರ? ಇಲ್ಲವೇ ರೈತರಿಗೆ ಒಂದು ನೈತಿಕ ಬೆಂಬಲ ಕೊಟ್ಟಿದ್ದಾರ? ಬೆಂಗಳೂರಿನಲ್ಲಿ ಪರಭಾಷಿಕರ ದಬ್ಬಾಳಿಕೆ ನಿರಂತರ ನಡೆಯುತ್ತೆ, ಕೆಲವು ಏರಿಯಾಗಳು ಪರಭಾಷಿಕರ ಸ್ವತ್ತಾಗಿವೆ, ಅಂಥವರಿಗೆ ಕರ್ನಾಟಕದಲ್ಲಿ  ಕನ್ನಡಿರಾಗಿ ಬದುಕಿ ಅಂತ ಎಂದಾದರು ಕರೆ ಕೊಟ್ಟಿದ್ದಾರ? ಬೆಳಗಾವಿ ವಿಷಯದಲ್ಲಿ ಎಮ್.ಇ,ಎಸ್ ಕಿಡಿ ಹಚ್ಚಿದಾಗ ಇವರು ಏನು ಮಾಡಿದ್ದಾರೆ? ಕಾವೇರಿ ನೀರಿನ ವಿವಾದ ತಾರಕಕ್ಕೆ ಏರಿದಾಗ ಮಾತ್ರ ಒಂದು ಎಂಟ್ರಿ, ಅದೂ ಸಹ ಲೇಟ್ ಎಂಟ್ರಿ.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉಡುಪಿ ಮಂಗಳೂರು, ಹೀಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಕನ್ನಡವನ್ನು ವಿವಿಧ ಶೈಲಿ ಗಳಲ್ಲಿ ಜನ ಮಾತಾನಾಡುತ್ತಾರೆ. ಅಲ್ಲಿನ ಭಾಷಾ ಸೊಗಡಿಗೆ ಗೌರವ ಕೊಟ್ಟು ಅಲ್ಲಿನ ಭಾಷೆಗಳನ್ನು ಉಪಯೋಗಿಸಿ ವರ್ಷಕ್ಕೆ ಒಳ್ಳೆಯ ಎಷ್ಟು ಸಿನಿಮಾ ಗಳನ್ನು ಇವರು ಮಾಡಿದ್ದಾರೆ. ಎಲ್ಲೋ ಆಗೊಂದು ಹೀಗೋಂದು ಸಿನಿಮಾ ಮಾಡಿದ್ದು ಬಿಟ್ಟರೆ, ಅಲ್ಲಿನ ಭಾಷೆಗಳನ್ನು ಹಾಸ್ಯಕ್ಕೆ ಉಪಯೋಗಿಸಿದ್ದೆ ಹೆಚ್ಚು. ಪಕ್ಕದ ಆಂಧ್ರ, ತಮಿಳುನಾಡಿ ನಲ್ಲಿ ವರ್ಷಕ್ಕೆ ಎರಡು ಮೂರಾದ್ರು ಪ್ರಾಂತೀಯ ಸಿನಿಮಾಗಳನ್ನು ಮಾಡುತ್ತಾರೆ. ಅದೂ ಅಲ್ಲದೆ ಅಲ್ಲಿನ ಸಿನಿಮಾಗಳು ಪ್ರತಿಜಿಲ್ಲೆ ಯಲ್ಲೂ ಚೆನ್ನಾಗಿ ಓಡುತ್ತವೆ. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇದಕ್ಕೆ ಇವರೇ ಕಾರಣ ಹೊರತು ಕರ್ನಾಟಕದ ಜನಸಾಮಾನ್ಯರಲ್ಲ. ಆ ಅಭಿರುಚಿ ಯನ್ನು ಬೆಳೆಸುವಲ್ಲಿ ಇವರು ವಿಫಲರಾಗಿದ್ದಾರೆ.

ಇವರ ಸಿನಿಮಾ ಗಳಲ್ಲಿ  ಹೊಸ ಪೀಳಿಗೆಯನ್ನು ಗುರಿಯಾಗಿಟ್ಟುಕೊಂಡು ಬಂದ ಇತ್ತೀಚಿನ ವರ್ಷಗಳಲ್ಲಿ ಬಂದ ಕೆಲ ಹಾಡುಗಳು ಸಾಹಿತ್ಯದ ಅರ್ಥವನ್ನೇ ಹಾಳುಮಾಡಿವೆ, 
೧. ಅಮ್ಮಾ ಲೂಸಾ, ಅಪ್ಪ ಲೂಸಾ,
೨. ಚಿಂಗಾರಿ ಚಿತ್ರದ ಯಬುಡ ಗಿಬುಡ
೩. ಕರಡೀಗೆ ಕತ್ತಲಿ ಜಾಮೂನು
೪. ಬಚ್ಚನ್ ಚಿತ್ರದ ಮೈಸೂರ್ ಪಾಕಲ್ಲಿ... ಟೋಟಲ್ ಆಗಿ... ಎಷ್ಟು ತೂತಿದೆ?
೫.'ಜಾಕಿ' ಚಿತ್ರದಲ್ಲಿ 'ಎಕ್ಕಾ ರಾಜ ರಾಣಿ ನಿನ್ನ ಕೈಯೊಳಗೆ', 
೬. 'ಹುಡುಗರು' ಸಿನಿಮಾದಲ್ಲಿ 'ಬೋರ್ಡು ಇರದ ಬಸ್ಸನು..', 
೭. 'ಜೋಗಯ್ಯ' ಚಿತ್ರದ 'ಕುರಿ ಕೋಳಿನ ಸೋಮವಾರ-ಶನಿವಾರ ಕುಯ್ಯಂಗಿಲ್ಲ'.. 
೮. 'ಲೈಫು ಇಷ್ಟೇನೆ' ಚಿತ್ರದ 'ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು'.. 
೮. 'ಪರಮಾತ್ಮ' ಚಿತ್ರದ 'ಆಲೂಗಡ್ಡೇನಾ.. ಗೋಡೆ ಹಲ್ಲಿನಾ..' '
೯. ಜಾನಿ' ಚಿತ್ರದ 'ಊರಿಗೊಬ್ಬಳೆ ಪದ್ಮಾವತಿ' 
ಹೀಗೆ ಒಂದಾ ಎರಡಾ...... ಕರ್ನಾಟಕದ ಜನತೆಗೆ ಅದರಲ್ಲೂ ಯುವ ಪೀಳಿಗೆಗೆ ಯಾವ ಸಂದೇಶವನ್ನು ಇವರು ಕೊಡಲು ಹೊರಟಿದ್ದಾರೆ? ಒಬ್ಬರಾದರು ಇಂತಹ ಸಾಹಿತ್ಯವನ್ನು ಖಂಡಿಸಿದ್ದಾರಾ? 

ಈ ಚಿತ್ರರಂಗದ ಜನರಿಗೆ ಅವರ ಚಿತ್ರ ಯಶಸ್ಸು ಕಾಣೋದು ಮುಖ್ಯ. ಅದಕ್ಕಾಗಿ ಚಿತ್ರ ನಟಿಯ ಹೊಟ್ಟೆ, ಸೊಂಟ, ಹೊಕ್ಕಳು, ಬರೀ ಬೆನ್ನು, ಸಾಧ್ಯವಾದರೆ ಸಂಪೂರ್ಣ ಬೆತ್ತಲೆ ಯಾಗಿ ತೋರಿಸೋದಿಕ್ಕೆ ಸಹ ಹಿಂಜರಿಯೋದಿಲ್ಲ. ಅಗ್ರಜ ಚಿತ್ರದಲ್ಲಿ, ಚಿತ್ರನಟಿ ಸಂಜನಾ ರವರ ಬೆತ್ತಲೆ ಮಲಗಿರುವ ದೃಶ್ಯದಲ್ಲಿ ಬರಿ ಬೆನ್ನನ್ನು ತೋರಿಸಲು ಬೇರೆ ನಟಿಯ ಡ್ಯೂಪ್ ಬಳಸಲಾಗಿದೆ ಎಂದು ನಟಿ ಸಂಜನಾ ಆರೋಪಿಸಿದ್ದಾರೆ. ಆದರೆ ಹಾಸ್ಯನಟ ಜಗ್ಗೇಶ್ ಮಾತ್ರ ಈ ಬಗ್ಗೆ ಕಮಕ್ ಕಿಮಕ್ ಎಂದಿಲ್ಲ. ಇಲ್ಲೇ ಗೊತ್ತಾಗುತ್ತೆ ಇವರ ಉಳಿವಿಗಾಗಿ ಅಥವ ಅವರ ಚಿತ್ರದ ಯಶಸ್ಸಿಗಾಗಿ ಬೇರೆಯವರನ್ನು ಹೇಗೆ ಬೇಕಾದರೆ ಹಾಗೆ ಉಪಯೋಗಿಸ್ಕೊಬಹುದು ಅಂತ.

ಇವರು ಮೊದಲು ಸಂಪೂರ್ಣ ಕರ್ನಾಟಕ ಜನರ ವಿಶ್ವಾಸ ಗಳಿಸಬೇಕು, ಕರ್ನಾಟಕ ಜನರ ವಿಶ್ವಾಸ ಗಳಿಸ ಬೇಕಾದರೆ, ಜನರಿಗೆ ಒಳ್ಳೆಯ ಸದಭಿರುಚಿಯ ಚಿತ್ರ ಗಳನ್ನು ಕೊಡಬೇಕು. ಜನರ ಸಮಸ್ಯೆಗಳಿಗೆ ಆಗು ಹೋಗುಗಳಿಗೆ ಸ್ಪಂದಿಸಬೇಕು. ಆಗ ಜನ ಇವರ ಕೈ ಹಿಡಿತಾರೆ, ಇಲ್ಲದೆ ಹೋದರೆ out of date ಆಗಿ expiry ಆಗೋದು ಖಂಡಿತ.